ಕೊರವಂಜಿ 2

ತಿಳಿನಗೆಯ ಲೇಖನಗಳಿಗೇ ಮೀಸಲಾಗಿದ್ದ ಕನ್ನಡ ಮಾಸಪತ್ರಿಕೆ. ಸ್ಥಾಪನೆ 1942ರಲ್ಲಿ. ಸಂಪಾದಕರು ರಾ.ಶಿ.(ಎಂ.ಶಿವರಾಂ). ಸಂಪಾದನಕಾರ್ಯದಲ್ಲಿ ಪತ್ರಿಕೆಗೆ ನಾ.ಕಸ್ತೂರಿಯವರ ಸಹಕಾರ ಲಭ್ಯವಾಗಿತ್ತು. ಚಿತ್ರಭಾನು ಸಂವತ್ಸರದ ಉಗಾದಿಯಂದು ಮೊದಲ ಸಂಚಿಕೆ ಹೊರಬಿತ್ತು. ಲೋಕದ ಯಾವುದೇ ವಾರ್ತೆಯನ್ನಾಗಲಿ ಸಮಾಜದ ಯಾವ ಘಟನೆಯನ್ನೇ ಆಗಲಿ, ತಿಳಿಯಾದ ನವುರಾದ ಹಾಸ್ಯದ ಹಿನ್ನೆಲೆಯಲ್ಲಿ ಕಣಿ ಹೇಳುವಂತೆ ವರದಿಮಾಡುವುದು ಕೊರವಂಜಿಯ ಗುರಿಯಾಗಿತ್ತು. ಕನ್ನಡ ಸಾಹಿತ್ಯದ ನಾನಾಪ್ರಕಾರಗಳನ್ನು ಕಣಿ ಹೇಳಲು ಬಳಸಿಕೊಳ್ಳುವುದಲ್ಲದೆ ಪ್ರಪಂಚದ ಇತರ ಭಾಷಾಸಾಹಿತ್ಯದಲ್ಲಿ ನೂತನವಾಗಿ ಬಂದ ಪ್ರಕಾರಗಳನ್ನೂ ಕನ್ನಡಕ್ಕೆ ಅಳವಡಿಸಿಕೊಂಡಿತು. ಪಂಚಪಂಕ್ತಿ (ಲಿಮರಿಕ್ಸ್) ಅಣುಕಹಾಡು, ಲಘುಪದ್ಯ, ಹರಟೆ, ಕಿರುನಾಟಕ ಇತ್ಯಾದಿ ಹಲವಾರು ಹೊಸ ಪ್ರಕಾರಗಳನ್ನು ಒದಗಿಸಿಕೊಟ್ಟಿತು.

	ಯಾವುದಾದರೂ ಒಂದು ಸಣ್ಣ ಘಟನೆಯನ್ನು ಕೊಂಕುದೃಷ್ಟಿಯಿಂದ ನೋಡಿದರೆ ಹಾಸ್ಯ ಉಕ್ಕುತ್ತದೆ. ಇಡೀ ಜೀವನವನ್ನೇ ಕೊಂಕುದೃಷ್ಟಿಯಿಂದ ನೋಡಿದರೆ ವೇದಾಂತದ ತಿರುಳು ಸ್ಪಷ್ಟ ಕಾಣಿಸುತ್ತದೆ. ತಿಳಿವಿಗಾಗಲಿ, ತಿಳಿಹಾಸ್ಯಕ್ಕಾಗಲಿ ಅಗತ್ಯವಾದ ಕೊಂಕುದೃಷ್ಟಿಯನ್ನು ಕನ್ನಡಿಗರಲ್ಲಿ ಪ್ರಚಾರಮಾಡಲು ಕೊರವಂಜಿ ಪ್ರಯತ್ನಿಸಿತು. ಜನತೆಯಲ್ಲಿ ವಿಧವಿಧ ಮನೋಧರ್ಮದವರಿರುತ್ತಾರಾಗಿ, ಹಾಸ್ಯದಲ್ಲೂ ವಿವಿಧ ಹಂತಗಳಿರುತ್ತವೆ. ಈ ಎಲ್ಲ ಹಂತಗಳಲ್ಲೂ ಲೇಖನಗಳು ಕೊರವಂಜಿಯಲ್ಲಿ ಬರುತ್ತಿದ್ದುವು. ತಿಂಗಳ ಮೊದಲ ತಾರೀಖಿನ ಸರದಿ ತಪ್ಪದೆ 25 ವರ್ಷಗಳ ಕಾಲ ಹೊರಬೀಳುತ್ತಿತ್ತು.  

	ಈ ಅವಧಿಯಲ್ಲಿ ಅ.ರಾ.ಸೇ., ದಾಶರಥಿ ದೀಕ್ಷಿತ್, ಬೆಂಗಳೂರಿನ ಟಿ.ಸುನಂದಮ್ಮ, ರಾಮಿ, ಕೇಫ ಇವರು ಸತತವಾಗಿ ಪತ್ರಿಕೆಗೆ ನೆರವು ನೀಡಿದರು. ಹಿರಿಯ ಸಾಹಿತಿಗಳಾದ ಕಾರಂತ, ಶ್ರೀರಂಗ, ಜಿ.ಪಿ.ರಾಜರತ್ನಂ ಮುಂತಾದವರ ಲೇಖನಗಳೂ ಕೊರವಂಜಿಯ ಪುಟಗಳಲ್ಲಿ ಆಗಿಂದಾಗ್ಗೆ ಪ್ರಕಟವಾಗುತ್ತಿದ್ದುವು. ವ್ಯಂಗ್ಯರೇಖಾಚಿತ್ರಕಾರ ಆರ್.ಕೆ.ಲಕ್ಷ್ಮಣ್ ಪತ್ರಿಕೆಯ ಪ್ರಾರಂಭದ ಹಲವು ವರ್ಷಗಳ ಕಾಲ ಕೊರವಂಜಿಗಾಗಿ ವ್ಯಂಗ್ಯಚಿತ್ರ ಬರೆಯುತ್ತಿದ್ದರು.

	ಹೇಳಿಕೊಳ್ಳುವಂಥ ಪ್ರಗತಿಯನ್ನು ಸಾಧಿಸಿರುವ, ಪ್ರಪಂಚದ ಇತರ ಭಾಷೆಗಳ ಹಾಸ್ಯಸಾಹಿತ್ಯಕ್ಕೆ ಸಮಸಮನಾಗಿ ನಿಲ್ಲಬಲ್ಲ, ಕೆಲವು ವೇಳೆ ಅವುಗಳನ್ನೂ ಮೀರಿಸಬಲ್ಲ, ಔನ್ನತ್ಯವನ್ನು ಕೊರವಂಜಿ ಸಾಧಿಸಿತ್ತು. ಪತ್ರಿಕೆ ಅತ್ಯಂತ ಜನಪ್ರಿಯವಾಗಿದ್ದರೂ ವ್ಯಾವಹಾರಿಕವಾಗಿ ನಷ್ಟವನ್ನನುಭವಿಸುತ್ತಿದ್ದು, ಬೆಳ್ಳಿಯ ಹಬ್ಬ ಆಚರಿಸಬೇಕಾದ ಸಮಯದಲ್ಲಿ ನಿಂತುಹೋಯಿತು. 

	ಆದರೆ ಆ ವೇಳೆಗೆ ಕೊರವಂಜಿಯ ದೃಷ್ಟಿಯಿಂದ ಬರೆದ ಲೇಖನಗಳು ಕನ್ನಡನಾಡಿನ ಹಲವಾರು ಪತ್ರಿಕೆಗಳಲ್ಲಿ ವಿಪುಲವಾಗಿ ಪ್ರಕಟವಾಗುತ್ತಿದ್ದುವು. ಕನ್ನಡ ಸಾಹಿತ್ಯದಲ್ಲಿ ಆ ದೃಷ್ಟಿ ಪ್ರತಿಷ್ಠಿತವಾಯಿತು. ಕೊರವಂಜಿಯ ಪ್ರಕಟಣೆಗೆ ಶಿವರಾಮ ಅವರ ಮಕ್ಕಳೂ ಮತ್ತು ಹಾಸ್ಯ ಸಾಹಿತಿಗಳು ಮುಂದಾದರು. ಆದೆ ಶಿವರಾಮ್, 'ಕೊರವಂಜಿ' ಬದಲು 'ಅಪರಂಜಿ' ಪ್ರಕಟಿಸಲು ಸಲಹೆ ನೀಡಿದರು. 	(ಎಂ.ಎಸ್.ಎಚ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ